ಅಂಡಾಣು ದಾನದೊಂದಿಗೆ ಐವಿಎಫ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿ
Author: Dr. Sai Manasa Darla, Consultant, Fertility Specialist & Laparoscopic Surgeon
ಅಂಡಾಶಯದ ಸಂಗ್ರಹ ಕಡಿಮೆ ಹೊಂದಿರುವ ಮಹಿಳೆಯರಿಗೆ (ಅಂಡಾಶಯದಲ್ಲಿ ಇರುವ ಫಲವತ್ತಾದ ಅಂಡಾಣುಗಳ ಸಂಖ್ಯೆ), ಅಥವಾ ಕಡಿಮೆ-ಗುಣಮಟ್ಟದ ಅಂಡಾಣುಗಳನ್ನು ಹೊಂದಿರುವ ಮಹಿಳೆಯರಿಗೆ ಅಂಡಾಣು ದಾನ ವರದಾನವಾಗಿದೆ. ಅಂಡಾಣು ದಾನಿಯೊಂದಿಗೆ ಐವಿಎಫ್ ದಂಪತಿಗಳಿಗೆ ಅವರು ತಂದೆ ತಾಯಿಯಾಗುವ ಕನಸನ್ನು ಸಾಧಿಸಲು ನೆರವಾಗುತ್ತದೆ.
ಅಂಡಾಣು ದಾನದೊಂದಿಗೆ ಐವಿಎಫ್ ಎಂದರೇನು?
ಅಂಡಾಣು ದಾನದೊಂದಿಗೆ ಐವಿಎಫ್ ಒಂದು ಅಸಿಸ್ಟೆಡ್ ಸಂತಾನೋತ್ಪಾದನೆಯ ತಂತ್ರಜ್ಞಾನವಾಗಿದೆ. ಇದು ಅನಾಮಧೇಯ ಅಂಡಾಣು ದಾನಿಯಿಂದ ಸಂಗ್ರಹಿಸಿದ ಪ್ರಬುದ್ಧ ಅಂಡಾಣುಗಳನ್ನು ಬಳಸಿಕೊಳ್ಳುತ್ತದೆ. ಹೀಗೆ ಪಡೆಯಲಾದ ಅಂಡಾಣುಗಳನ್ನು ನಂತರ ಪುರುಷ ಸಂಗಾತಿಯ ವೀರ್ಯದೊಂದಿಗೆ ಫಲಿಸುವಂತೆ ಮಾಡಲಾಗುತ್ತದೆ. ಈ ಫಲೀಕರಣದ ನಂತರ, ಪರಿಣಾಮವಾಗಿ ಭ್ರೂಣವನ್ನು ಪಡೆಯುವವರ ಗರ್ಭಾಶಯಕ್ಕೆ ಅಳವಡಿಸಲು ವರ್ಗಾಯಿಸಲಾಗುತ್ತದೆ.
ಐವಿಎಫ್ ಅಂಡಾಣು ದಾನಕ್ಕೆ ಯಾರಿಗೆ ಅಗತ್ಯ?
ಅಂಡಾಣು ದಾನದೊಂದಿಗೆ ಐವಿಎಫ್ ಅನ್ನು ಈ ಕೆಳಕಂಡ ರೋಗಲಕ್ಷಣಗಳಿಂದ ಬಳಲುತ್ತಿರುವ ಮಹಿಳೆಯರಿಗೆ ಶಿಫಾರಸು ಮಾಡಲಾಗುತ್ತದೆ:
– ಅವಧಿಪೂರ್ವ ಮೆನೋಪಾಸ್
– ಅವಧಿಪೂರ್ವ ಗರ್ಭಾಶಯದ ವೈಫಲ್ಯ · ಕಡಿಮೆ ಗರ್ಭಾಶಯದ ರಿಸರ್ವ್
– ಐವಿಎಫ್ ಪ್ರಕ್ರಿಯೆಗಳ ಪುನರಾವರ್ತಿತ ವೈಫಲ್ಯ
– ಕ್ಯಾನ್ಸರ್ ಮತ್ತು ಕಿಮೋಥೆರಪಿಯಂತಹ ವೈದ್ಯಕೀಯ ಪರಿಸ್ಥಿತಿಗಳು ಮತ್ತು ಚಿಕಿತ್ಸೆಗಳು
– ಅನುವಂಶಿಕ ಮತ್ತು ಜನ್ಮಜಾತ ಸಮಸ್ಯೆಗಳು
– ವಿವಾಹದ ವಯಸ್ಸು ಮೀರಿರುವುದು
ಅಂಡಾಣು ದಾನಿಗೆ ಏನು ಮಾನದಂಡ?
ಮಹಿಳೆಗೆ ಅಂಡಾಣು ದಾನ ಮಾಡಲು ದಿ ಅಸಿಸ್ಟೆಡ್ ರೀಪ್ರೊಡಕ್ಟಿವ್ ಟೆಕ್ನಾಲಜಿ(ನಿಯಂತ್ರಣ) ಮಸೂದೆ, 2021ರಲ್ಲಿ ಮಾನದಂಡ ನಿಗದಿಪಡಿಸಲಾಗಿದೆ. ಭಾರತದಲ್ಲಿ ಅಂಡಾಣು ದಾನವು ಅನಾಮಿಕ ಪ್ರಕ್ರಿಯೆಯಾಗಿದೆ ಎಂದು ತಿಳಿಯುವುದು ಮುಖ್ಯವಾಗಿದೆ.
ಅಂಡಾಣು ದಾನಿಯು 23ರಿಂದ 35 ವರ್ಷಗಳ ವಯಸ್ಸಿನ ಆರೋಗ್ಯಕರ ಮಹಿಳೆಯಾಗಿರಬೇಕು.
ಅಂಡಾಣು ದಾನಿ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಅಂಡಾಣುಗಳನ್ನು ದಾನ ಮಾಡಬಹುದು ಮತ್ತು 7 ಕ್ಕಿಂತ ಹೆಚ್ಚು ಅಂಡಾಣುಗಳನ್ನು ಪಡೆಯಬಾರದು.
ಎ.ಆರ್.ಟಿ. ಬ್ಯಾಂಕ್ ಅಂಡಾಣು ದಾನಿಯ ಹೆಸರು, ಆಧಾರ್ ಸಂಖ್ಯೆ, ವಿಳಾಸ ಮತ್ತು ಅಗತ್ಯವಿರುವ ಯಾವುದೇ ಇತರ ವಿವರಗಳನ್ನು ಒಳಗೊಂಡಂತೆ ಎಲ್ಲಾ ಅಗತ್ಯ ಮಾಹಿತಿಯನ್ನು ಪಡೆಯುತ್ತದೆ.
ದಾನಿಯ ಅಂಡಾಣುವನ್ನು ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಲಾಗುವುದಿಲ್ಲ ಮತ್ತು ಅಂತಹ ಅಂಡಾಣುವನ್ನು ನಾಶ ಮಾಡಲಾಗುತ್ತದೆ ಅಥವಾ ಈ ಕಾಯ್ದೆಯ ಅಡಿಯಲ್ಲಿ ನೋಂದಾಯಿತವಾದ ಸಂಶೋಧನಾ ಸಂಸ್ಥೆಗೆ ದಂಪತಿ ಅಥವಾ ವ್ಯಕ್ತಿಯ ಅನುಮತಿಯ ಮೇರೆಗೆ ದಾನ ಮಾಡಲಾಗುತ್ತದೆ.
ದಾನಿಯ ವೈದ್ಯಕೀಯ ಪರೀಕ್ಷೆ: ದಾನಿಯನ್ನು ಈ ಕೆಳಕಂಡ ಸಾಂಕ್ರಾಮಿಕ ರೋಗಗಳಿಗೆ ಪರೀಕ್ಷಿಸಲಾಗುತ್ತದೆ, ಅವುಗಳಲ್ಲಿ ಹ್ಯೂಮನ್ ಇಮ್ಯುನೋಡಿಫಿಷಿಯೆನ್ಸಿ ವೈರಸ್(ಎಚ್.ಐ.ವಿ) ಟೈಪ್ 1 ಮತ್ತು 2, ಹೆಪಟೈಟಿಸ್ ಬಿ ವೈರಸ್(ಎಚ್.ಬಿ.ವಿ.), ಹೆಪಟೈಟಿಸ್ ಸಿ ವೈರಸ್(ಎಚ್.ಸಿ.ವಿ.), ವಿ.ಡಿ.ಆರ್.ಎಲ್. ಮೂಲಕ ಟ್ರೆಪೊನೆಮಪಲ್ಲಿಡಂ(ಸಿಫಿಲಿಸ್)
ದಾನಿಯು ತನ್ನ ಅಂಡಾಣುವಿನಿಂದ ಜನಿಸಿದ ಮಗು ಅಥವಾ ಮಕ್ಕಳ ಮೇಲಿನ ಎಲ್ಲಾ ಪೋಷಕರ ಹಕ್ಕುಗಳನ್ನು ತ್ಯಜಿಸಬೇಕು.
ಅಂಡಾಣು ದಾನಿಯೊಂದಿಗೆ ಐವಿಎಫ್ ಪ್ರಕ್ರಿಯೆ ಹೇಗೆ?
ಅಂಡಾಣು ದಾನಿಯೊಂದಿಗೆ ಐವಿಎಫ್ ಪ್ರಕ್ರಿಯೆ ಹೀಗೆ ವಿಂಗಡಿಸಲಾಗಿದೆ:
1. ಸ್ವೀಕರಿಸುವವರ ಮೌಲ್ಯಮಾಪನ
ಫರ್ಟಿಲಿಟಿ ತಜ್ಞರಿಂದ ಮೂಲಭೂತ ಮೌಲ್ಯಮಾಪನವನ್ನು ಮಾಡಲಾಗುತ್ತದೆ. ಮೌಲ್ಯಮಾಪನವು ಕಾರ್ಯವಿಧಾನದಲ್ಲಿ ಮಧ್ಯಪ್ರವೇಶ ಮಾಡುವ ಯಾವುದೇ ಅಸಹಜತೆಗಳನ್ನು ಗುರುತಿಸಲು ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.
ಪರೀಕ್ಷೆಗಳು ಸೇರಿವೆ:
· ಗರ್ಭಕೋಶದಲ್ಲಿ ಅಸಹಜತೆಗಳನ್ನು ಕಂಡುಕೊಳ್ಳಲು ಅಲ್ಟ್ರಾಸೌಂಡ್ ಪರೀಕ್ಷೆ
· ಮೂಲಭೂತ ರಕ್ತ ಪರೀಕ್ಷೆಗಳು(ಹಾರ್ಮೋನ್ ಪ್ರೊಫೈಲ್, ಕಂಪ್ಲೀಟ್ ಬ್ಲಡ್ ಪಿಕ್ಚರ್, ಇತ್ಯಾದಿ)
· ಪ್ಯಾಪ್ ಸ್ಮಿಯರ್ಸ್ ಮತ್ತು ಮ್ಯಾಮೊಗ್ರಾಮ್ ಗಳಂತಹ ಪರೀಕ್ಷೆಗಳು
2. ದಾನಿಯ ಆಯ್ಕೆ
ದಾನಿಯನ್ನು ಅಂಡಾಣು ದಾನಿಯ ಪ್ರೊಫೈಲ್ ಗಳಿಂದ ಆಯ್ಕೆ ಮಾಡಲಾಗುತ್ತದೆ ಅದನ್ನು ಸ್ವೀಕರಿಸುವ ದಂಪತಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಮೇಲೆ ಹೇಳಲಾದಂತೆ, ದಾನಿಯು ಅನಾಮಿಕರಾಗಿರುತ್ತಾರೆ. ಜನಾಂಗ, ಕೂದಲ ಬಣ್ಣ, ಕಣ್ಣಿನ ಬಣ್ಣ ಮತ್ತಿತರೆ ಮೂಲಭೂತ ವಿವರಗಳಾದ ಶಿಕ್ಷಣ ಮತ್ತು ಉದ್ಯೋಗವನ್ನು ಸ್ವೀಕರಿಸುವವರೊಂದಿಗೆ ಹಂಚಿಕೊಳ್ಳಲಾಗುತ್ತದೆ.
3. ದಾನಿ ಮತ್ತು ಸ್ವೀಕರಿಸುವವರ ಋತುಚಕ್ರದ ಸಮನ್ವಯತೆ
ಸ್ವೀಕರಿಸುವವರು ಮತ್ತು ಅಂಡಾಣು ದಾನಿಯ ಋತುಚಕ್ರಗಳನ್ನು ಅಂಡಾಣು ದಾನದೊಂದಿಗೆ ಐವಿಎಫ್ ಪ್ರಕ್ರಿಯೆಗೆ ಹೊಂದಿಸಬೇಕಾಗುತ್ತದೆ. ಇದು ಸಾಮಾನ್ಯವಾಗಿ ಜನನ ನಿಯಂತ್ರಣ ಮಾತ್ರೆಗಳನ್ನು ಬಳಸಿ ನಡೆಸಲಾಗುತ್ತದೆ. ಒಮ್ಮೆ ದಾನಿಯನ್ನು ಆಯ್ಕೆ ಮಾಡಿದ ನಂತರ ಸ್ವೀಕರಿಸುವ ಮಹಿಳೆಯನ್ನು ಎಸ್ಟ್ರಾಡಿಯೊಲ್ ಮಾತ್ರೆಗಳನ್ನು ಸೂಚಿತ ಪ್ರಮಾಣದಲ್ಲಿ ನೀಡುವ ಮೂಲಕ ಅವರ ಸಂಬಂಧಿಸಿದ ಋತುಚಕ್ರಗಳು ಹೊಂದಿಕೊಳ್ಳುವಂತೆ ಮಾಡಲಾಗುವ ಮೂಲಕ ಸ್ವೀಕರಿಸುವ ಮಹಿಳೆಯ ಗರ್ಭಕೋಶಕ್ಕೆ ಆಕೆಯ ಋತುಚಕ್ರದ ಎರಡನೆಯ ದಿನ ಭ್ರೂಣ ವರ್ಗಾವಣೆ ಮಾಡಲಾಗುತ್ತದೆ. ಮತ್ತು ದಾನಿಗೆ ಅಂಡಾಣು ಪ್ರಚೋದನೆಗೆ ಹಾರ್ಮೋನಿನ ಇಂಜೆಕ್ಷನ್ ಗಳನ್ನು ನೀಡಲಾಗುತ್ತದೆ.
4. ಅಂಡಾಣು ದಾನಿಯಿಂದ ಅಂಡಾಣು ಸಂಗ್ರಹ ಪ್ರಕ್ರಿಯೆ
ದಾನಿಯ ಅಂಡಾಣು ಪ್ರಚೋದನೆ
ಅಂಡಾಣು ದಾನಿಯನ್ನು ಅಂಡಾಶಯದ ಪ್ರಚೋದನೆಗೆ ಹಾರ್ಮೋನಿನ ಚುಚ್ಚುಮದ್ದು ನೀಡುವ ಮೂಲಕ ಹಲವು ಪ್ರಬುದ್ಧ ಅಂಡಾಣುಗಳನ್ನು ಉತ್ಪಾದಿಸಲು ಪ್ರಯತ್ನಿಸಲಾಗುತ್ತದೆ.
ದಾನಿಯಿಂದ ಅಂಡಾಣು ಪಡೆಯುವ ಪ್ರಕ್ರಿಯೆ
ಅಂಡಾಶಯದ ಪ್ರಚೋದನೆಯ ನಂತರ ಅಂಡಾಶಯದ ಕೋಶಕಗಳನ್ನು ಅಂಡಾಣು ಪ್ರಬುದ್ಧತೆಗೆ ಉತ್ತೇಜಿಸಲಾಗುತ್ತದೆ. ಅಂಡಾಶಯಗಳು ಸೂಕ್ತವಾದ ಮತ್ತು ಬಯಸಿದ ಕೋಶಕದ ಗಾತ್ರ ತಲುಪಿದ ನಂತರ ಮಾತ್ರ ಉತ್ತೇಜಿಸಲಾಗುತ್ತದೆ ಎಂದು ತಿಳಿಯುವುದು ಮುಖ್ಯ.
11-12 ದಿನಗಳು ತೆಗೆದುಕೊಳ್ಳುವ ಪ್ರಬುದ್ಧತೆಯ ಪ್ರಕ್ರಿಯೆಯ ನಂತರ ಅಂಡಾಣು ಸಂಗ್ರಹ ಪ್ರಕ್ರಿಯೆ ಅಥವಾ ಎಗ್ ರಿಟ್ರೀವಲ್ ಪ್ರೊಸೆಸ್ ಅನ್ನು ಅರಿವಳಿಕೆ ನೀಡಿ ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ ಪಡೆಯಲಾಗುತ್ತದೆ.
5. ಇನ್ ವಿಟ್ರೊ ಫರ್ಟಿಲೈಸೇಷನ್:
ಸ್ವೀಕರಿಸಿದ ನಂತರ ಅಂಡಾಣುಗಳನ್ನು ಹೇಗೆ ಫರ್ಟಿಲೈಸ್ ಮಾಡಲಾಗುತ್ತದೆ?
ಅಂಡಾಣು ಸಂಗ್ರಹ ಪ್ರಕ್ರಿಯೆಯ ದಿನದಂದೇ ಅಂಡಾಣು ಸ್ವೀಕರಿಸುವವರ ಸಂಗಾತಿಯಿಂದ ವೀರ್ಯದ ನಮೂನೆ ಪಡೆಯಲಾಗುತ್ತದೆ. ಸ್ವೀಕರಿಸಿದ ಅಂಡಾಣುಗಳನ್ನು ಈ ವೀರ್ಯದೊಂದಿಗೆ ನಿಯಂತ್ರಿತ ಪ್ರಯೋಗಾಲಯದ ಪರಿಸರದಲ್ಲಿ ಫಲವಂತಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ. ಕಡಿಮೆ ವೀರ್ಯದ ಪ್ರಮಾಣ ಅಥವಾ ವೀರ್ಯದ ಚಲನೆಯ ಪ್ರಮಾಣ ಕಡಿಮೆ ಇರುವಂತಹ ಕೆಲ ಪ್ರಕರಣಗಳಲ್ಲಿ ಫಲಗೊಳ್ಳಲು ಐಸಿಎಸ್ಐ ನಡೆಸಲಾಗುತ್ತದೆ. ಐಸಿಎಸ್ಐ(ಇಂಟ್ರಾ ಸೈಟೊಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್) ಒಂದು ವಿಧಾನವಾಗಿದ್ದು ಇದರಲ್ಲಿ ನಮೂನೆಯಿಂದ ಅತ್ಯುತ್ತಮ ವೀರ್ಯ ಸಂಗ್ರಹಿಸಲಾಗುತ್ತದೆ ಮತ್ತು ಅಂಡಾಣುವಿನೊಳಕ್ಕೆ ಸೇರಿಸಲಾಗುತ್ತದೆ.
ಫಲೀಕರಣದ 3ರಿಂದ 5 ದಿನಗಳ ನಂತರ ಭ್ರೂಣಗಳು ಭ್ರೂಣ ವರ್ಗಾವಣೆಯ ಮತ್ತು ಯಶಸ್ವಿ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸಲು ಬ್ಲಾಸ್ಟೊಸಿಸ್ಟ್ ಹಂತಕ್ಕೆ ಬೆಳೆಸಲಾಗುತ್ತದೆ.
ಯಾವುದೇ ಹೆಚ್ಚುವರಿ ಭ್ರೂಣ ರೂಪುಗೊಂಡರೆ ಅದನ್ನು ಈ ಚಿಕಿತ್ಸೆ ವಿಫಲವಾದಲ್ಲಿ ಭವಿಷ್ಯದ ಉದ್ದೇಶಗಳಿಗಾಗಿ ಘನೀಕರಿಸಲಾಗುತ್ತದೆ.
6. ಸ್ವೀಕರಿಸುವವರ ಎಂಡೋಮೆಟ್ರಿಯಲ್ ವರ್ಗಾವಣೆ ಮತ್ತು ಭ್ರೂಣ ವರ್ಗಾವಣೆ:
ಸ್ವೀಕರಿಸುವವರಿಗೆ ಭ್ರೂಣ ಅಳವಡಿಕೆಗೆ ಪೂರಕವಾದ ಔಷಧಗಳನ್ನು ಸೂಚಿಸಲಾಗುತ್ತದೆ.
1ರಿಂದ 2 ಆರೋಗ್ಯಕರ ಭ್ರೂಣಗಳನ್ನು ಸ್ವೀಕರಿಸುವವರ ಗರ್ಭಕೋಶಕ್ಕೆ ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ ವರ್ಗಾಯಿಸಲಾಗುತ್ತದೆ.
7. ಗರ್ಭಧಾರಣೆ ಪರೀಕ್ಷೆ:
ರಕ್ತದ ಗರ್ಭಧಾರಣೆ ಪರೀಕ್ಷೆಯನ್ನು ಭ್ರೂಣ ವರ್ಗಾವಣೆಯ ನಂತರ ಕಾಯವ ಎರಡು ವಾರಗಳ ನಂತರ ನಡೆಸುವ ಮೂಲಕ ಈ ಪ್ರಕ್ರಿಯೆ ಯಶಸ್ವಿಯಾಗಿದೆಯೋ ಇಲ್ಲವೋ ಎಂದು ತಿಳಿಯಲಾಗುತ್ತದೆ. ಗರ್ಭಧಾರಣೆಯ ಫಲಿತಾಂಶ ತಿಳಿಯಲು ರಕ್ತದಲ್ಲಿನ ಎಚ್.ಸಿ.ಜಿ. ಮಟ್ಟ ಅಳೆಯಲಾಗುತ್ತದೆ.
ಅಂತಿಮವಾಗಿ ಹೇಳುವುದೇನೆಂದರೆ,
ಅಂಡಾಣು ದಾನದಿಂದ ಐವಿಎಫ್ ಎನ್ನುವುದು ಹಲವಾರು ಕಾರಣಗಳಿಗೆ ತಾಯ್ತನ ಹೊಂದಲು ಅಶಕ್ತರಾದ ಮಹಿಳೆಯರಿಗೆ ಭರವಸೆಯಾಗಿದೆ. ಅಂಡಾಣು ದಾನಿಯಿಂದ ಐವಿಎಫ್ ಯಶಸ್ಸಿನ ಪ್ರಮಾಣವು ಸ್ವೀಕರಿಸುವವರ ಮತ್ತು ದಾನಿಯ ಹಲವಾರು ಅಂಶಗಳನ್ನು ಆಧರಿಸಿರುತ್ತದೆ ಎನ್ನುವುದು ತಿಳಿಯುವುದು ಮುಖ್ಯ. ಸ್ವೀಕರಿಸುವವರ ಮೇಲೆ ವಯಸ್ಸು, ಎಂಡೋಮೆಟ್ರಿಯಲ್ ದಪ್ಪ, ದೇಹದ ತೂಕ, ಗರ್ಭಕೋಶದ ಸ್ಥಿತಿ, ಭ್ರೂಣದ ಗುಣಮಟ್ಟ ಇತ್ಯಾದಿ ಮತ್ತು ಸ್ವೀಕರಿಸಿದ ಪ್ರಬುದ್ಧ ಅಂಡಾಣುಗಳು ಪರಿಣಾಮ ಬೀರುತ್ತವೆ. ಅಂಡಾಣು ದಾನದೊಂದಿಗೆ ಐವಿಎಫ್ ಕುರಿತು ನಿಮ್ಮ ಆಯ್ಕೆಗಳನ್ನು ತಿಳಿಯಲು ನಮ್ಮ ಫರ್ಟಿಲಿಟಿ ತಜ್ಞರನ್ನು ಇಂದೇ ಸಂಪರ್ಕಿಸಿ.